Friday 24 December 2010

ಸ್ವಾಗತಿಸುವೆ ಓ ಬಾ ನೀಲ ಮೇಘ ಶ್ಯಾಮಾ.

ನಾ ತುಳಸಿ; ವೃಂದಾವನದಲ್ಲಿ. ಜನ ಮನೆ ಮನದಾ; ಅಂಗಳದಲ್ಲಿ.
ಆರಾಧಿಸುತ ಕಾದಿಹೆನಿಲ್ಲಿ. ಕರೆಯುವೆ ಕೇಳದೆ; ಲೀಲಾ ಲೋಲಾ,
ಸ್ವಾಗತಿಸುವೆ ಓ ಬಾ; ನೀಲ ಮೇಘ ಶ್ಯಾಮಾ.
ಅಂಗಳ ದೊಳಗಿನ, ಹೂ ಬನದೊಳಗೆ; ಅಂದ ಚೆಂದದ, ಅರಗಿಣಿಯಂತೆ.
ನಳ ನಳಿಸುವ, ಹೂವಿನ ಸೊಗಸು; ಮಧುರ ಮಧುರದಾನಂದದ; ಕನಸು.
ಸುತ್ತಲು ಹಸುರಿನ ಪ್ರಾಂಗಣದಲ್ಲಿ; ಹೂ ಬನ ಅರಳಿದೆ ಮಧುಬನದಲ್ಲಿ.
ರಾಧಾ ತುಳಸಿ ಕಾದಿಹೆನಿಲ್ಲಿ; ಲೀಲಾಲೋಲ, ನೀ ಇರುವೆ ಎಲ್ಲಿ?
ಕರೆಯುವೆ ಕೇಳದೆ; ಲೀಲಾ ಲೋಲಾ? ಸ್ವಾಗತಿಸುವೆ ಓ ಬಾ; ನೀಲ ಮೇಘ ಶ್ಯಾಮಾ.

ನಸುಕಿನ ಜಾವದ, ಮುಸುಕನು ತೆರೆಯುತ; ಪ್ರಭಾತ ಸೂರ್ಯ; ನಭವ ತುಂಬಲು.
ಮಂಜದು ಸರೆಯಲು, ಕೃಷ್ಣ ವನದೊಳು; ಹೂಗಳು ನಲಿಯಲು, ನವಿಲು ಕುಣಿದವು.
ಚಿಲಿಪಿಲಿ ಹಕ್ಕಿ, ಚಿಲಿಪಿಲಿ ಗುಟ್ಟಲು; ಸ್ವರದಲಿ ಸ್ವರ; ಮೇಳೈಸುತಿರಲು.
ಗುಕ್ ಗುಕ್ ಎಂದವು ಗೊರವಂಕಗಳು, ಕುಹೂ ಕುಹೂ ಕೋಗಿಲೆ; ಮಂಜುಳ ವಾಣಿ,
ಕೇಳಲು ಒಲಿಯನೆ; ಕುಂಜವಿಹಾರಿ? ಮಧುರ ಮಧುರ; ವೀ ಮಂಜುಳ ಗಾನಾ.
ಕುಂಜವಿಹಾರಿ,ಬಾರೋ ಮುರಾರಿ; ಸ್ವಾಗತಿಸುವೆ, ಓ ಬಾ; ನೀಲ ಮೇಘ ಶ್ಯಾಮಾ.












No comments:

Post a Comment