Wednesday 15 December 2010

ದಿನಕರನ ದಿನಚರಿ

ನಸುಕಿನ ಜಾವಾ ಮುಸುಕಿನಾ ವೇಳೆ,ಮಂಜು ಬಿದ್ದಿತು ತಣ್ಣ ತಣ್ಣಗೆ.
ತಂಗಾಳಿಯದು,ಬೀಸಲು, ತಂಪಗೆ,ಜಗ ಮರೆತಿದೆ ಮನ ಏಳಲಾಗದೆ.
ಮಾಮರ ಕೋಗಿಲೆ ಕುಹೂ ಕುಹೂ ಕೂಗೆ,ಅರಳುತಲಿವೆ ಹೂ ನಗುತ ಮೆಲ್ಲಗೆ.
ಮುಂಗೋಳಿ ಕೂಗಲುಮೆಲ್ಲಗೆ;ಮೂಡು ನಾಚಿತು ಕೆಂಪಗೆ.
ನೊಸಲಿಗೆ ತಿಲಕವ ನಿಡುತ ನೇಸರ; ಪಸರಿಸಿ ಹೊಂಬಣ್ಣದಾ ಬೆಳಕ.
ಏರುವ ಸೂರ್ಯನ ಬೆಳಕನು ಕಂಡು ; ಹಕ್ಕಿಯಾ ಚಿಲಿಪಿಲಿ ಮಂಜುಳ ಹಾಡು.
ನದಿಯಲಿ ಮುಳುಗುತ ಭಕ್ತರ ದಂಡು; ಅರ್ಘ್ಯವ ನೀಡುತ,ನಮಿಸಿದರು.
ಹೊಸಲಿಗೆ ಬರುತಿಹ ತೇಜದ ಬೆಳುಕಿಗೆ;ಮರೆಯಾಗುತಿಹನು ಚಂದ್ರನು ಮೆಲ್ಲಗೆ.
ಅಚ್ಚಿಗೆ ಹಚ್ಚಿದ ಕಿಚ್ಚದ ಹೊಳಪು.ಗರ್ರನೆ ತಿರುಗುವ ಚಿನ್ನದ ಬೆಳಕು.
ಗುಡಿಯಲಿ ಪೂಜೆಯು ನಡೆಯುತಿರೆ,ಮಕ್ಕಳು ಪಾಠವ ಮಾಡುತಿರೆ,
ದನಕರು ಮೇಯಲು ಸಾಗುತಿರೆ,ರೈತರು ನೇಗಿಲು ಹಿಡಿದಿಹರು.
ಮನೆ ಮನೆಯಲ್ಲಿ ಅಂಗಳ ಗುಡಿಸುತ; ಹೊಸಲಿಗೆ ರಂಗವಲಿ ಹಾಕಿದರು.
ಅಂಗಡಿ ತೆರದವು ವ್ಯಾಪಾರ ಮಾಡಲು,ಸುಂದರ ಗೊಂಡವು  ರಥ ಬೀದಿಗಳು.
ಸುಖ ಶಾಂತಿ ಜಗಕೆ, ನೀಡುತ ದಿನಕರ; ಸಾಗಿದ ಸಂಜೆ,ಪಡುವಣದಿ.
ನಯನ ಮನೋಹರ; ಕೆಂಪಾಗಿ ರವಿ.ಸ್ವಾಗತಿಸಲವಗೆ; ಸಂಧ್ಯಾದೇವಿ.
ದಿನದ ಕಾಯಕ, ಮುಗಿಸಿದ ದಿನಕರ ; ಸೇರಿದ ತಾಯಿಯಾ ಮಡಿ ಲಡಿಗೆ.
ದುಡಿವರು ತಿರುಗಿದರು ಮನೆಯಡಿಗೆ, ಹಕ್ಕಿಯ ಕಲರವ ಸೇರಲು ಗೂಡಿಗೆ,
ಕತ್ತಲೆಯಡರಿತು; ಅಡಿಗಡಿಗೆ.


No comments:

Post a Comment